ಮೀಡ್, ರಿಚರ್ಡ್ ಜಾನ್
 	 1821-94. ಮೈಸೂರು ಸಂಸ್ಥಾನದ ಚೀಫ್ ಕಮಿಷನರ್ (1870-75) ಕ್ಯಾಪ್ಪನ್ ಜಾನ್ ಮೀಡ್‍ನ ಜಾನ್ ಮೀಡ್‍ನ ಮಗ. ರಾಯಲ್ ನೇವಿ ಶಾಲೆಯಲ್ಲಿ ಶಿಕ್ಷಣ ಪಡೆದು ಭಾರತಕ್ಕೆ ಬಂದು 1838ರಲ್ಲಿ ಬಂಗಾಲ ವಿಭಾಗದ ಸೈನ್ಯಕ್ಕೆ ಸೇರಿದ. 1857ರ ಸಿಪಾಯಿದಂಗೆಯ ಕಾಲದಲ್ಲಿ ಮೀಡ್ ಒಂದು ವಿಭಾಗದ ಸೈನ್ಯಾಧಿಕಾರಿಯಾಗಿದ್ದ. ತಾಂತ್ಯಾಟೋಪಿಯನ್ನು ಸೆರೆಹಿಡಿದವ ಇವನೇ. ಅನುಕ್ರಮವಾಗಿ ಲೆಫ್ಟಿನೆಂಟ್ ಜನರಲ್ ಹಾಗೂ ಜನರಲ್ ಹುದ್ದೆಗೇರಿದ. ಇವನು 1860ರಲ್ಲಿ ಗ್ವಾಲಿಯರ್‍ನಲ್ಲಿ ರಾಜತಾಂತ್ರಿಕ ಪ್ರತಿನಿಧಿಯಾಗಿದ್ದ. 1861ರಲ್ಲಿ ಮಧ್ಯಪ್ರಾಂತ್ಯದ ಗವರ್ನರ್ ಜನರಲ್‍ರವರ ಪ್ರತಿನಿಧಿಯಾಗಿ ನೇಮಕಗೊಂಡ. ಮೈಸೂರು ಸಂಸ್ಥಾನದ ಚೀಫ್ ಕಮಿಷನರ್ ಆಗಿದ್ದ ಬೌರಿಂಗ್ ರಾಜೀನಾಮೆ ನೀಡಿದ ಅನಂತರ 1870ರ ಫೆಬ್ರವರಿಯಲ್ಲಿ ಮೀಡ್ ಮೈಸೂರಿನ ಚೀಫ್ ಕಮಿಷನರ್ ಆಗಿ ನೇಮಕವಾಗಿ 1875ರ ಏಪ್ರಿಲ್ ತನಕ ಅದೇ ಹುದ್ದೆಯಲ್ಲಿ ಮುಂದುವರಿದ. ಈ ಮಧ್ಯದಲ್ಲಿ 1873_74ರಲ್ಲಿ ಬರೋಡ ಗಾಯಕವಾಡ ಮಲ್ಹಾರಿರಾಯನ ಮೇಲಿನ ಮೊಕದ್ದಮೆಯ ಸಂಬಂಧದಲ್ಲಿ ರಚಿತವಾದ ಉನ್ನತಮಟ್ಟದ ನ್ಯಾಯ ಮಂಡಳಿಯ ಸದಸ್ಯನಾಗಿದ್ದ. 1875ರಲ್ಲಿ ಬರೋಡ ಸಂಸ್ಥಾನದ ಆಡಳಿತದಲ್ಲಿ ನೇಮಕಗೊಂಡ ಅನಂತರ 1876_81 ಅವಧಿಯಲ್ಲಿ ಹೈದರಾಬಾದಿನ ರೆಸಿಡೆಂಟ್ ಆಗಿದ್ದ. 20_3_1894ರಲ್ಲಿ ಮೀಡ್ ದಕ್ಷಿಣ ಫ್ರಾನ್ಸ್‍ನಲ್ಲಿ ಮರಣ ಹೊಂದಿದ. ಬ್ರಿಟಿಷ್ ಸರ್ಕಾರ ಇವನಿಗೆ ಕೆ.ಸಿ.ಎಸ್.ಐ. ಪ್ರಶಸ್ತಿ ನೀಡಿತ್ತು.

	ಇವನು ಮೈಸೂರು ಸಂಸ್ಥಾನದ ಕಮಿಷನರ್ ಆಗಿದ್ದ ಕಾಲದಲ್ಲಿ ದೇಶದ ಸಾರ್ವಜನಿಕ ಉಪಯೋಗಿ ಕೆಲಸಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಎಲ್ಲ ಕೆರೆಕಟ್ಟೆಗಳನ್ನು ದುರಸ್ತಿ ಮಾಡುವ ಮತ್ತು ದೇಶದ ಮೂಲೆಮೂಲೆಗಳಿಗೆ ರಸ್ತೆಗಳನ್ನು ರಚಿಸುವ ಕೆಲಸಗಳನ್ನು ಕೈಗೊಳ್ಳಲಾಯಿತು. ಅನೇಕ ಹೊಸ ಸಾರ್ವಜನಿಕ ಕಟ್ಟಡಗಳ ರಚನೆಯಾಯಿತಲ್ಲದೆ ಸಣ್ಣ ನಗರಗಳ ಅಭಿವೃದ್ದಿ ಕಾರ್ಯವನ್ನೂ ಕೈಗೊಳ್ಳಲಾಯಿತು. ದೇಶದ ಭೂಸರ್ವೇಕ್ಷಣ ನಡೆದುದಲ್ಲದೆ ಹಳ್ಳಿಗಳ ಬಳಿಯಲ್ಲಿ ತೋಪುಗಳನ್ನು ನೆಡಿಸುವ ಕೆಲಸವನ್ನು ಕೈಗೊಳ್ಳಲಾಯಿತು. ವಿದ್ಯಾಭ್ಯಾಸ ಮತ್ತು ಕೃಷಿರಂಗಗಳಿಗೆ ಪ್ರೋತ್ಸಾಹ ದೊರಕಿತು. ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಕೆಲವು ತಾಲ್ಲೂಕುಗಳು ಒಟ್ಟು ಸೇರಿದ ಸಬ್ ಡಿವಿಷನ್‍ಗಳನ್ನು ರಚಿಸಿ ಅವುಗಳ ಮೇಲ್ವಿಚಾರಣೆಗೆ ಅಸಿಸ್ಟೆಂಟ್ ಸೂಪರಿಂಟೆಂಡೆಂಟರನ್ನು ನಿಯಮಿಸಲಾಯಿತು (1871). ಲೋಕೋಪಯೋಗಿ, ಅರಣ್ಯ ಮತ್ತು ಮೋಜಣಿ ಇಲಾಖೆಗಳಲ್ಲಿ ಸ್ಥಳೀಯ ಆಡಳಿತದಾರರನ್ನು ಉನ್ನತ ಹುದ್ದೆಗಳಿಗೆ ನೇಮಿಸಲು ತರಬೇತಿ ನೀಡುವುದಕ್ಕಾಗಿ ಫ್ರೂಬೇಷನರಿ ಹುದ್ದೆಗಳನ್ನು ರಚಿಸಲಾಯಿತು. ಮನ್‍ಸೀಫ್ ಕೋರ್ಟುಗಳನ್ನು ಸ್ಥಾಪಿಸಿ ಅಮಲ್ದಾರರಿಂದ ನ್ಯಾಯನಿರ್ಣಯದ ಹೊರೆ ತಪ್ಪಿಸಲಾಯಿತು. ಪೋಲೀಸ್ ಇಲಾಖೆಯನ್ನು ಗ್ರಾಮದಿಂದ ಹಿಡಿದು ಮೇಲಿನ ಹಂತದವರೆಗೆ ಸುವ್ಯವಸ್ಥಿತಗೊಳಿಸಲಾಯಿತು.

	ಬೆಂಗಳೂರಿನ ಪ್ರಸಿದ್ದ ಕಬ್ಬನ್‍ಪಾರ್ಕ್ ಸ್ಥಾಪಿತವಾದುದು ಮೀಡ್‍ನಿಂದ. ಆ ಪಾರ್ಕಿಗೆ ಮೀಡ್ ಪಾರ್ಕ್ ಎಂದೇ ಹೆಸರಿತ್ತು. ಆದರೆ ಅನಂತರ ಅವನ ಇಚ್ಛೆಯಂತೆ ಅದಕ್ಕೆ ಕಬ್ಬನ್ ಪಾರ್ಕ್ ಎಂಬ ಅಭಿದಾನ ನೀಡಲಾಯಿತು.				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ